Popular Posts

ಸುಲಭತೆ ಬೆನ್ನಟ್ಟಿದ ಸಮಾಜ. ಡಿಜಿಟಲೀಕರಣದಿಂದ ಮರೆಯಾಗುತ್ತಿವೆ ಕೌಶಲ್ಯಗಳು:

Spread the love

ಸ್ಮಾರ್ಟ್‌ಫೋನ್, ಇಂಟರ್ನೆಟ್, ಆ್ಯಪ್ಸ್ ಇವುಗಳು ನಮ್ಮ ಜೀವನವನ್ನು ಅತಿ ಸುಲಭಗೊಳಿಸಿದ್ದರೂ, ಅವುಗಳ ಮೇಲಿನ ಅತಿಯಾದಾ ಅವಲಂಬನೆ ಕೆಲವು ಮೂಲಭೂತ ಕೌಶಲ್ಯಗಳನ್ನು ನಿಧಾನವಾಗಿ ಮರೆಯುವಂತೆ ಮಾಡುತ್ತಿದೆ. “ಡಿಜಿಟಲ್ ಏಜ್” ಎನ್ನುವ ಸುಲಭತೆಗಳ ಕಾಲದಲ್ಲಿ, ಮಾನಸಿಕ ಚುರುಕುತನ ಮತ್ತು ಪ್ರಾಯೋಗಿಕ ಜ್ಞಾನ ಕಡಿಮೆಯಾಗುತ್ತಿರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಡಿಜಿಟಲೀಕರಣದಿಂದ ಕಳೆದುಕೊಳ್ಳುತ್ತಿರುವುದೇನು.!?

  1. ಕೈಬರಹ ಮತ್ತು ಕರ್ಸಿವ್ ಬರವಣಿಗೆ

ಮೊದಲು ನೋಟ್ಸ್ ಬರೆಯುವುದು, ಪತ್ರ ಬರೆಯುವುದು ಸಾಮಾನ್ಯವಾಗಿತ್ತು. ಈಗ ಟೈಪಿಂಗ್‌ಗೇ ಮೊದಲ ಪ್ರಾಶಸ್ತಯವಿದ್ದು ಸ್ಪಷ್ಟ, ಸೊಗಸಾದ ಕೈಬರಹ ಕಡಿಮೆಯಾಗುತ್ತಿದೆ. ವೈಯಕ್ತಿಕ ಅನುಭವಗಳು, ದಿನಚರಿ ಬರವಣಿಗೆ ಕೂಡ ಕಡಿಮೆಯಾಗುತ್ತಿದೆ.

  1. ಮರೆಯಾಗುತ್ತಿದೆ ದುರಸ್ತಿ ಸಂಸ್ಕೃತಿ

ಬಟ್ಟೆ, ಫರ್ನಿಚರ್, ಎಲೆಕ್ಟ್ರಾನಿಕ್ಸ್ ಸಾಧನಗಳು ಹಾಳಾದರೆ ತಕ್ಷಣ ಬದಲಾಯಿಸುವ ಸಂಸ್ಕೃತಿ ಹೆಚ್ಚಾಗಿದೆ. ಹಳೆಯದನ್ನು ಸರಿಪಡಿಸಿ ಬಳಸುವ ಮನೋಭಾವ ಕಡಿಮೆಯಾಗುತ್ತಿದೆ. ಇದರಿಂದ ವ್ಯರ್ಥ ಖರ್ಚಲ್ಲದೇ ಪರಿಸರಕ್ಕೂ ಹಾನಿಯುಂಟಾಗಲಿದೆ

  1. ತೋಟಗಾರಿಕೆ ಮತ್ತು ಆಹಾರ ಬೆಳೆಸುವುದು.

ಮಣ್ಣು, ವಾತಾವರಣ, ಕಾಂಪೋಸ್ಟ್ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ನಗರ ಜೀವನದಲ್ಲಿ ತೋಟಗಾರಿಕೆ ದೂರವಾಗುತ್ತಿದ್ದಂತೆ, ಆಹಾರ ಹೇಗೆ ಬೆಳೆಯುತ್ತದೆ ಎಂಬ ಸಾಮಾನ್ಯ ಮೂಲಭೂತ ಜ್ಞಾನವೂ ಯುವ ಪೀಳಿಗೆಗೆ ತಿಳಿಯದಾಗಿದೆ.

  1. ಮಾನಸಿಕ ಗಣಿತ.

ಕ್ಯಾಲ್ಕುಲೇಟರ್ ಇಲ್ಲದೆ ಸರಳ ಗಣಿತ ಮಾಡುವ ಸಾಮರ್ಥ್ಯ ಕುಸಿಯುತ್ತಿರುವ. ಮೊಬೈಲ್ ಆ್ಯಪ್‌ಗಳ ಮೇಲಿನ ಅವಲಂಬನೆ ಹೆಚ್ಚಿದ್ದು ಮೆದುಳಿನ ಚುರುಕುತನಕ್ಕೆ ಸವಾಲಾಗುತ್ತಿದೆ.

  1. ಸ್ಮರಣಾಶಕ್ತಿ

ಫೋನ್ ನಂಬರುಗಳು, ಜನ್ಮದಿನಗಳು, ದಿಕ್ಕುಗಳು ಎಲ್ಲವೂ ಮೊಬೈಲ್‌ನಲ್ಲಿ ಉಳಿಸಿಕೊಂಡಿರುವುದರಿಂದ ನೆನಪಿಟ್ಟುಕೊಳ್ಳುವ ಅಭ್ಯಾಸ ಕಡಿಮೆಯಾಗುತ್ತಿದೆ.

  1. ನಕ್ಷೆ ಓದುವಿಕೆ ಮತ್ತು ದಿಕ್ಕು ಗುರುತಿಸುವಿಕೆ.

GPS ಇಲ್ಲದೆ ದಾರಿ ಹುಡುಕುವುದು ಹಲವರಿಗೆ ಕಷ್ಟವಾಗಿದೆ. ಭೌತಿಕ ನಕ್ಷೆ ಓದುವಿಕೆ ಮತ್ತು ಸ್ಥಳಪರಿಚಯದ ಕೌಶಲ್ಯ ಕಡಿಮೆಯಾಗುತ್ತಿದೆ. ಸಂಪೂರ್ಣ ಮೊಬೈಲ್ ಮ್ಯಾಪ್‌ಗಳ ಮೇಲೆಯೆ ಜನರು ಅವಲಂಬಿತರಾಗುತ್ತಿದ್ದಾರೆ.

  1. ಅಡುಗೆ

ರೆಡಿ-ಮೇಡ್ ಮತ್ತು ಪ್ರೊಸೆಸ್ಡ್ ಆಹಾರಗಳ ಬಳಕೆ ಹೆಚ್ಚುತ್ತಿರುವುದರಿಂದ, ಮೂಲ ಪದಾರ್ಥಗಳಿಂದ ಅಡುಗೆ ಮಾಡುವ ಕೌಶಲ್ಯ ಕಡಿಮೆಯಾಗಿದೆ. ರೆಡಿ ಟು ಈಟ್ ಪದಾರ್ಥಗಳ ಬಳಕೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ.

  1. ಆಹಾರ ಸಂರಕ್ಷಣೆ

ಉಪ್ಪಿನಕಾಯಿ, ಒಣಗಿಸುವಿಕೆ, ಫರ್ಮೆಂಟೇಶನ್ ಮುಂತಾದ ಸಂರಕ್ಷಣೆ ವಿಧಾನಗಳು ಹಿಂದಿನ ಪೀಳಿಗೆಗೆ ಸಾಮಾನ್ಯವಾಗಿದ್ದರೂ, ಇಂದಿನ ಪೀಳಿಗೆಗೆ ಅಪರೂಪವಾಗಿವೆ.

  1. ಮುಖಾಮುಖಿ ಭಿನ್ನಾಭಿಪ್ರಾಯ ನಿವಾರಣೆ

ಡಿಜಿಟಲ್ ಸಂದೇಶಗಳ ಮೂಲಕ ಸಂವಹನ ಹೆಚ್ಚಾದಂತೆ, ಮುಖಾಮುಖಿಯಾಗಿ ಭಿನ್ನಾಭಿಪ್ರಾಯಗಳನ್ನು ಸಮಾಧಾನದಿಂದ ಪರಿಹರಿಸುವ ಕೌಶಲ್ಯ ಕುಗ್ಗುತ್ತಿದೆ. ಯಾರಾದರೂ ಎದುರಾದರೆ ಸಾಮಾನ್ಯವಾಗಿ ಹೇಗೆ ಮಾತನಾಡಿಸಬೇಕು ಎಂಬುದು ಕೂಡ ತಿಳಿಯದಾಗಿದೆ.

  1. ಪ್ರಾಥಮಿಕ ಚಿಕಿತ್ಸೆ ಜ್ಞಾನ

ಸಣ್ಣ ಗಾಯಗಳಿಗೂ ತಕ್ಷಣ ವೈದ್ಯಕೀಯ ಸಹಾಯವನ್ನು ಹುಡುಕುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಮೂಲಭೂತ ಪ್ರಥಮ ಚಿಕಿತ್ಸಯ ಬಗ್ಗೆ ತಿಳುವಳಿಕೆ ಪ್ರತಿಯೊಬ್ಬರಿಗೂ ಅಗತ್ಯ.

ತಜ್ಞರ ಅಭಿಪ್ರಾಯ

ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ತಂತ್ರಜ್ಞಾನ ಬಳಕೆ ತಪ್ಪಲ್ಲ. ಆದರೆ ಅದರ ಮೇಲೆ ಪೂರ್ಣ ಅವಲಂಬನೆ ನಮ್ಮ ಸ್ವಾವಲಂಬನೆಯನ್ನು ಕುಗ್ಗಿಸಬಹುದು. “ಡಿಜಿಟಲ್ ಸಾಧನಗಳನ್ನು ಬಳಸುತ್ತಾ, ಮೂಲಭೂತ ಕೌಶಲ್ಯಗಳನ್ನು ಉಳಿಸಿಕೊಳ್ಳುವುದು ಅತ್ಯವಶ್ಯಕ” ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪರಿಹಾರವೇನು?

•   ವಾರದಲ್ಲಿ ಒಂದು ದಿನ “ಡಿಜಿಟಲ್ ಡಿಟಾಕ್ಸ್”
•   ಮಕ್ಕಳಿಗೆ ಕೈಬರಹ, ನಕ್ಷೆ ಓದುವಿಕೆ ಅಭ್ಯಾಸ
•   ಮನೆಯಲ್ಲೇ ಸಣ್ಣ ತೋಟಗಾರಿಕೆ ಪ್ರಾರಂಭ.
•   ತಿಂಗಳಲ್ಲಿ ಒಂದು ಬಾರಿ ಹೊಸ ಪದಾರ್ಥದಿಂದ ಅಡುಗೆ
•   ಮೂಲಭೂತ ಪ್ರಾಥಮಿಕ ಚಿಕಿತ್ಸೆ ತರಬೇತಿ

ಡಿಜಿಟಲ್ ಪ್ರಗತಿ ಅನಿವಾರ್ಯ. ಆದರೆ ಪ್ರಗತಿಯ ಜೊತೆಗೂಡೇ ಪರಂಪರಾಗತ ಕೌಶಲ್ಯಗಳನ್ನು ಉಳಿಸಿಕೊಳ್ಳುವುದು ಸಮಾಜದ ಸಮತೋಲನಕ್ಕಾಗಿ ಅಗತ್ಯವಾಗಿದೆ.

Leave a Reply

Your email address will not be published. Required fields are marked *